ಲಕ್ಷ್ಮೀಶ : - 1550. ಜೈಮಿನಿಭಾರತ ಎಂಬ ಪ್ರಸಿದ್ಧ ಕಾವ್ಯದ ಕರ್ತೃ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ದೇವನೂರು ಇವನ ಜನ್ಮಸ್ಥಳ. ಕೆಲವರ ಪ್ರಕಾರ ಇದು ಸುರಪುರ ತಾಲ್ಲೂಕಿನ ದೇವಪುರ. ಇವನ ತಂದೆ ಅಣ್ಣಮಾಂಕ. ಕವಿಗೆ ಲಕ್ಷ್ಮೀಪತಿ ಎಂಬ ಹೆಸರೂ ಇದ್ದಂತೆ ತಿಳಿಯುತ್ತದೆ. ಕರ್ನಾಟಕವಿಚೈತ್ರವನಚೂತ ಎಂಬುದು ಈತನ ಬಿರುದು. ಈತ ಕಾವ್ಯವನ್ನು ವಿದ್ವತ್ಸಭಾವಲಯಮರಿಯೆ ವಿರಚಿಸಿದೆಂ ಎಂದು ಹೇಳಿಕೊಂಡಿರುವುದರಿಂದ ಈ ಗ್ರಂಥವನ್ನು ತನ್ನ ಸಮಕಾಲೀನ ವಿದ್ವಾಂಸರ ಸಭೆಯಲ್ಲಿ ಓದಿ ಅವರಿಂದ ಮೆಚ್ಚುಗೆ ಪಡೆದಂತೆ ತೋರುತ್ತದೆ. ಕಾವ್ಯರಚನೆಯನ್ನು ತನ್ನ ಇಷ್ಟದೈವ ದೇವಪುರದರಸು ಲಕ್ಷ್ಮೀರಮಣಸ್ವಾಮಿಯ ಅಂಕಿತದಲ್ಲಿ ಕೈಗೊಂಡಿದ್ದಾನೆ. ಕವಿಯ ಕಾಲನಿರ್ಣಯದ ಬಗ್ಗೆ ವಿದ್ವಾಂಸರಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಜೈಮಿನಿಭಾರತ 1345-47ರ ಅವಧಿಯಲ್ಲಿ ರಚಿತವಾಗಿದೆ ಎಂಬುದು ಇತ್ತೀಚಿನ ಒಂದು ಅಭಿಪ್ರಾಯ. ಪೂರ್ವಕವಿಗಳಲ್ಲಿ ಈತ ಯಾರನ್ನೂ ಸ್ಮರಿಸಿಲ್ಲ. ಈತನನ್ನು ಲಕ್ಷ್ಮಕವಿ, ಕೋನಯ್ಯ, ಬಬ್ಬೂರ ರಂಗ, ಗೋವಿಂದ ಮೊದಲಾದ ಕವಿಗಳು ಗೌರವದಿಂದ ಸ್ಮರಿಸಿದ್ದಾರೆ.

ಜೈಮಿನಿಭಾರತ ವಾರ್ಧಕಷಟ್ಟದಿಯಲ್ಲಿದೆ. ಇದರಲ್ಲಿ 31 ಸಂಧಿಗಳೂ 1907 ಪದ್ಯಗಳೂ ಇವೆ. ಇದು ಸಂಸ್ಕೃತ ಜೈಮಿನಿಭಾರತದ ಅನುವಾದ. ಕಥಾ ವಸ್ತುವಿನಲ್ಲೂ ಬಹುಮಟ್ಟಿಗೆ ಮೂಲವನ್ನೇ ಅನುಸರಿಸಿರುವುದು ಕಂಡುಬರುತ್ತದೆ. ಆದರೂ ಮೂಲದಲ್ಲಿರುವ ಅಪ್ರಯೋಜಕವಾದ, ನೀರಸವಾದ, ಬಹುದೀರ್ಘವಾದ ಭಾಗಗಳನ್ನು ಬಿಟ್ಟು ಮಧ್ಯೆಮಧ್ಯೆ ತನ್ನ ರಸಿಕತೆಯನ್ನೂ ವರ್ಣನಾ ವೈಖರಿಯನ್ನೂ ಪ್ರದರ್ಶಿಸುವ ಭಾಗಗಳನ್ನು ಸೇರಿಸಿದ್ದಾನೆ. ಕವಿ ತನ್ನ ಕೃತಿಯ ಸ್ವರೂಪವನ್ನು ಒಂದು ಪದ್ಯದಲ್ಲಿ ಹೀಗೆ ವ್ಯಕ್ತಪಡಿಸಿದ್ದಾನೆ:
ಪುಣ್ಯಮಿದು ಕೃಷ್ಣಚರಿತಾಮೃತಂ ಸುಕವೀಂದ್ರ
ಗಣ್ಯಮಿದು ಶೃಂಗಾರಕುಸುಮ ತರುತುರುಗಿದಾ
ರಣ್ಯಮಿದು ನವರಸಪ್ರೌಢಲಾಲಿತ್ಯನಾನಾವಿಚಿತ್ರಾರ್ಥಂಗಳ
ಗಣ್ಯಮಿದು ಶಾರದೆಯ ಸನ್ಮೋಹನಾಂಗ ಲಾ
ವಣ್ಯಮಿದು ಭಾವಕರ ಕಿವಿದೊಡವಿಗೊದವಿದಹಿ
ರಣ್ಯಮಿದು ಭೂತಳದೊಳೆನೆ ವಿರಾಜಿಪುದು ಲಕ್ಷ್ಮೀಪತಿಯ ಕಾವ್ಯರಚನೆ

ಈ ಕಾವ್ಯದಲ್ಲಿ ಪಾಂಡವರ ಕಥೆ ಆನುಷಂಗಿಕವಾಗಿದ್ದು ಕೃಷ್ಣಚರಿತೆಯ ಪ್ರಕಾಶನಕ್ಕೆ ಹೆಚ್ಚು ಮಹತ್ತ್ವ ನೀಡಿ ಕೃತಿಯನ್ನು ಸಂಪೂರ್ಣವಾಗಿ ಕೃಷ್ಣಭಕ್ತರ ಕಥಾಗುಚ್ಛವನ್ನಾಗಿಸಿದ್ದಾನೆ. ಕೃಷ್ಣಭಕ್ತರಾದ ವೃಷಕೇತು, ಯೌವನಾಶ್ವ, ಮರುತ್ತರಾಯ, ಅನುಸಾಲ್ವ, ನೀಲಧ್ವಜ, ಹಂಸಧ್ವಜ, ಸುಧನ್ವ, ಬಭ್ರುವಾಹನ, ತಾಮ್ರಧ್ವಜ, ಮಯೂರ ಧ್ವಜ, ಚಂದ್ರಹಾಸ ಮೊದಲಾದವರ ಕಥೆಗಳು ಅನುಸ್ಯೂತವಾಗಿ ಚಿತ್ರಿತವಾಗಿವೆ. ಕವಿ ಈ ಕಥೆಗಳನ್ನು ಹೇಳುವುದರಲ್ಲಿ ಪ್ರಾರಂಭಿಸುವುದರಲ್ಲಿ, ಬೆಳೆಸುವುದರಲ್ಲಿ, ಮುಗಿಸುವುದರಲ್ಲಿ ತನ್ನ ಕಥಾಕೌಶಲವನ್ನು ತೋರ್ಪಡಿಸಿದ್ದಾನೆ. ಲಕ್ಷ್ಮೀಶ ಶ್ರೇಷ್ಠ ಮಟ್ಟದ ಕಥೆಗಾರ ಎಂಬುದು ಇಂಥ ಕಥೆಗಳಿಂದ ವ್ಯಕ್ತವಾಗುತ್ತದೆ.

ಜೈಮಿನಿಭಾರತ ಪ್ರಧಾನವಾಗಿ ವೀರರಸ ಪ್ರತಿಪಾದಕ ಕಾವ್ಯವಾದರೂ ಇತಿಮಿತಿಯಿಂದ ಕೂಡಿದ ಶೃಂಗಾರ ವರ್ಣನೆಗಳನ್ನೂ ಒಳಗೊಂಡಿದೆ, ಉತ್ತಮ ನೀತಿ ಗ್ರಂಥವೂ ಆಗಿದೆ. ಯುದ್ಧವರ್ಣನೆಗಳು ವೀರರಸಯುಕ್ತ ವಾಗಿವೆ. ಪ್ರಕೃತಿವರ್ಣನೆಗಳು ಪರಿಚಿತ ರೂಪಕ ಉಪಮೆಗಳಿಂದ ಕಣ್ಣಿಗೆ ಕಟ್ಟುವಂತಿವೆ. ಕಾವ್ಯವನ್ನು ಕೃಷ್ಣಚರಿತಾಮೃತಂ ಎಂದು ಕವಿ ಹೇಳಿಕೊಂಡಿ ರುವುದರಿಂದ ಭಕ್ತಿರಸಕ್ಕೂ ಅವಕಾಶ ಮಾಡಿಕೊಂಡಿದ್ದಾನೆ. ಭಕ್ತಿರಸ ಪ್ರತಿಪಾದನೆಯಲ್ಲಿಯೂ ಕವಿ ಸಿದ್ಧಹಸ್ತನೆನಿಸಿದ್ದಾನೆ. ವಿಷ್ಣುಭಕ್ತಿಯನ್ನು ಪ್ರತಿಪಾದನೆ ಮಾಡುವಲ್ಲಿ ಅನ್ಯದೈವಗಳಲ್ಲಿ ಸಹನೆ ತೋರಿದ್ದಾನೆ. ಕವಿಯ ಹರಿಹರಾಭೇದ ದೃಷ್ಟಿಗೆ ಕಾವ್ಯದಲ್ಲಿ ಸಾಕಷ್ಟು ನಿದರ್ಶನಗಳು ದೊರಕುತ್ತವೆ. ವಿಸ್ತಾರವಾಗಿರುವ ಮೂಲಕಥೆಯನ್ನು ಸಂಗ್ರಹಿಸುವಲ್ಲಿ ಕವಿಯ ಸ್ವೋಪಜ್ಞತೆ ಕಂಡುಬರುತ್ತದೆ. ಸ್ತ್ರೀಪಾತ್ರಗಳ ಚಿತ್ರಣದಲ್ಲಿ ವೈವಿಧ್ಯ ಎದ್ದು ತೋರುತ್ತದೆ. ಸತ್ಯಭಾಮೆ, ಜ್ವಾಲೆ, ಪ್ರಭಾವತಿ, ಪ್ರಮೀಳೆ, ಚಿತ್ರಾಂಗದೆ, ವಿಷಯೆ, ಸೀತಾದೇವಿ, ಚಂಡಿ ಈ ಒಂದೊಂದು ಪಾತ್ರಗಳೂ ಒಂದೊಂದು ಬಗೆಯಾಗಿದ್ದು, ಓದುಗರ ಮೇಲೆ ಅಚ್ಚಳಿಯದ ಪ್ರಭಾವ ಬೀರುವಂತಿವೆ. ಚಂಡಿಯ ಕಥೆ, ಚಂದ್ರಹಾಸನ ಕಥೆ, ಸೀತಾದೇವಿಯ ಕಥೆಗಳಲ್ಲಿ ಕರುಣ ರಸ ಉಕ್ಕಿ ಹರಿಯುತ್ತದೆ. ಚಂಡಿಯ ಕಥೆಯಲ್ಲಿ ಹಾಸ್ಯದ ಜೊತೆಗೆ ವಿರಸ ದಾಂಪತ್ಯಚಿತ್ರಣ ಸುಂದರವಾಗಿ ಬಂದಿದೆ. ಸೀತಾದೇವಿಯ ಕಥೆ ಮೂಲಕ್ಕಿಂತಲೂ ಪ್ರಭಾವಪೂರ್ಣವಾಗಿದೆ, ಧ್ವನಿಪೂರ್ಣವಾಗಿದೆ. ಚಂದ್ರಹಾಸನ ಕಥೆಯಲ್ಲಿ ಕವಿಯ ವಿಷ್ಣುಭಕ್ತಿ ಗರಿಗೆದರಿದೆ.

ಭಾಷಾಬಳಕೆಯಲ್ಲಿ ಕವಿಯ ರಸಿಕತೆ, ಪಾಂಡಿತ್ಯ, ಪ್ರತಿಭಾಸಾಮಥ್ರ್ಯ ದರ್ಶಿತವಾಗುತ್ತದೆ. ಉಪಮೆ ರೂಪಕಗಳ ಬಳಕೆಯಲ್ಲಿ ಮನೋಹರತೆ ಕಂಡು ಬರುತ್ತದೆ. ಉಪಮೆಗಳು ಜೀವಂತವಾಗಿವೆ, ರಸಾದ್ರ್ರವಾಗಿವೆ. ಕಟುಕರ ಕೈಯಲ್ಲಿ ಸಿಕ್ಕ ಚಂದ್ರಹಾಸನ ಪರಿಸ್ಥಿತಿಯನ್ನು ಕಾಕಸಂಘಾತ ದೊಳ್ ಸಿಕ್ಕಿರ್ದ ಕೋಗಿಲೆಯ ಮರಿಯಂತೆ ಎಂದೂ ದುಃಖಿಸುವ ಧರ್ಮರಾಯನ ಸ್ಥಿತಿಯನ್ನು ಅನಿಲ ಸಂಚಾರಮೊಂದಿನಿತಿಲ್ಲದುರಿವ ಕಡುವೇಸಗೆಯ ಬಿಸಿಲಿಂದೆ ಬಸವಳಿದ ಕೋಮಲ ರಸಾಲದಂತೆ ಎಂದೂ ಉದ್ದಾಲಕ ಚಂಡಿಯರ ವಿರಸ ದಾಂಪತ್ಯವನ್ನು ಮುಳ್ಳಿಡಿದ ಮರನೇರಿದಂತೆ ಎಂದೂ ಲಕ್ಷ್ಮಣನ ಮಾತು ಸೀತಾದೇವಿಯ ಕಿವಿಗೆ ಬಿದ್ದಾಗ ಗರ್ಭಿಣಿ ಯಾದ ಸೀತೆ ನೆಲಕ್ಕೆ ಬಿದ್ದಳೆಂಬುದನ್ನು ಬಿರುಗಾಳಿ ಪೊಡೆಯಲ್ಕೆ ಕಂಪಿಸಿ ಫಲಿತ ಕದಳಿ ಮುರಿದಿಳೆಗೊರಗುವಂತೆ ಎಂದೂ ಹೇಳುವ ಕಲ್ಪನೆಗಳು ಸುಂದರವಾಗಿವೆ. ಉಪಮಾಲೋಲ ಎಂಬ ಮಾತಿಗೆ ಸಾಕ್ಷಿಯಾಗಿ ಇಂಥ ಹಲವಾರು ನಿದರ್ಶನಗಳು ಕೃತಿಯ ಒಡಲಲ್ಲಿ ತುಂಬಿಕೊಂಡಿವೆ. ಬಿಡಿಬಿಡಿಯಾಗಿ ಈತ ಹೇಳಿರುವ ಒಂದೊಂದು ಕಥೆಯೂ ತನಗೆ ತಾನೇ ಪ್ರತ್ಯೇಕವಾಗಿ ನಿಂತುಕೊಳ್ಳುವ ಕಾವ್ಯ ಮಹತ್ತ್ವವನ್ನು ಪಡೆದುಕೊಂಡಿವೆ. ಈ ಕಾವ್ಯವನ್ನು ಒಂದು ಕಥಾಸರಿತ್ಸಾಗರ ಎಂದೂ ಕರೆಯಬಹುದು. ಷಟ್ಪದಿಯ ರಚನೆ ಕವಿಯ ಮನೋಭಾವವನ್ನು ಸಮರ್ಥವಾಗಿ ಸಹೃದಯರಿಗೆ ಸಂವಹನಿಸುವಲ್ಲಿ ಸಹಾಯಕವಾಗಿದೆ. ಇಷ್ಟಾದರೂ ಇವನ ಕಾವ್ಯ ಸಂಪ್ರದಾಯದ ಜಾಡಿನಲ್ಲಿ ಪಾಂಡಿತ್ಯದ ಭಾರದಲ್ಲಿ ನಡೆಯುವ ಕೃತಿ. ನಾರಣಪ್ಪನ ಪ್ರತಿಭಾ ಪ್ರಭಾವವನ್ನೂ ಸ್ವತಂತ್ರಮನೋಧರ್ಮವನ್ನೂ ಇಲ್ಲಿ ಕಾಣಲಾಗುವುದಿಲ್ಲ. ಸಂಭಾಷಣಾವೈಖರಿಯಲ್ಲಿ ಈತ ರನ್ನ, ರಾಘವಾಂಕ, ಕುಮಾರವ್ಯಾಸ ಇವರಿಗೆ ಋಣಿಯಾಗಿರುವಂತೆ ತೋರುತ್ತದೆ. ಕವಿ ಸಂಸ್ಕøತ-ಕನ್ನಡ ಭಾಷೆಗಳೆರಡರಲ್ಲಿಯೂ ಪಂಡಿತನಾಗಿದ್ದಂತೆ ಒಳ್ಳೆಯ ತತ್ತ್ವಜ್ಞಾನಿಯೂ ಆಗಿದ್ದನೆಂಬುದಕ್ಕೆ ಕಾವ್ಯದಲ್ಲಿ ಸಾಕಷ್ಟು ಸಂದರ್ಭಗಳು ದೊರೆಯುತ್ತವೆ. ಆಧ್ಯಾತ್ಮಿಕ ವಿಚಾರಗಳನ್ನು ಹೇಳುವಲ್ಲಿ ಕವಿಗೆ ಅಪಾರ ಲೋಕಾನುಭವವಿರುವುದು ವ್ಯಕ್ತವಾಗುತ್ತದೆ. ಈ ಎಲ್ಲ ದೃಷ್ಟಿಗಳಿಂದ ಲಕ್ಷ್ಮೀಶನನ್ನು ಮಹಾಕವಿ ಎಂದು ಕರೆಯಲಾಗದಿದ್ದರೂ ಕನ್ನಡದ ಉತ್ತಮ ಕವಿಗಳಲ್ಲಿ ಒಬ್ಬ ಎನ್ನಬಹುದು.

ಜೈಮಿನಿಭಾರತ ಒಂದು ಕಾಲಕ್ಕೆ ಕರ್ನಾಟಕಾದ್ಯಂತವೂ ಪ್ರಚಲಿತವಾಗಿದ್ದು ರಾತ್ರಿಯ ಹೊತ್ತು ಹಳ್ಳಿಯಲ್ಲಿ ಇದನ್ನು ನಿತ್ಯಪಾರಾಯಣ ಮಾಡುತ್ತಿದ್ದರಂತೆ. ಅಷ್ಟೇ ಅಲ್ಲ, ಜೈಮಿನಿ ಭಾರತವನ್ನು ಓದಿ ಅರ್ಥ ಹೇಳುವಷ್ಟು ತಿಳಿವಳಿಕೆ ಒಬ್ಬ ವ್ಯಕ್ತಿಗೆ ಬಂದರೆ ಆತ ಪಂಡಿತ, ಬುದ್ಧಿವಂತ ಎಂಬ ನಂಬಿಕೆಯೂ ಜನಪದರಲ್ಲಿತ್ತೆಂದು ಹೇಳುವುದುಂಟು. ಈ ಕಾವ್ಯವನ್ನು ಆಧರಿಸಿ ಸೋಲೂರು ಹುಚ್ಚಕವಿ ಎಂಬಾತ ಯಾಗಚರಿತೆ ಎಂಬ ಹೆಸರಿನಿಂದ ಯಕ್ಷಗಾನವನ್ನು ಬರೆದಿದ್ದಾನೆ. ಜೈಮಿನಿಭಾರತವನ್ನೇ ಆಧರಿಸಿ ಪ್ರಮೀಳಾ ರ್ಜುನೀಯ, ಸುಧನ್ವಾರ್ಜುನರ ಕಾಳಗ, ಬಭ್ರುವಾಹನಾರ್ಜುನರ ಕಾಳಗ, ಚಂದ್ರಹಾಸ ನಾಟಕ, ಕುಶಲವರ ಕಾಳಗ ಇತ್ಯಾದಿ ನಾಟಕಗಳು ರಚಿತವಾಗಿವೆ.
	
	(ಎನ್.ಎಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ